ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 1 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ 7 ಆರೋಪಿಗಳನ್ನು ಬೆಂಗಳೂರಿನ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುಷ್ಪ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳ ಬಂಧನ; 1 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 23, 2022 | 6:59 PM

ಬೆಂಗಳೂರು: ಪುಷ್ಪ (Pushpa) ಸಿನಿಮಾ ಶೈಲಿಯಲ್ಲಿ ಗಾಂಜಾ (Ganja) ಸಾಗಿಸುತ್ತಿದ್ದ 7 ಆರೋಪಿಗಳನ್ನು ಬೆಂಗಳೂರಿನ (Bengaluru) ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1 ಕೋಟಿ ಮೌಲ್ಯದ 175 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಅರವಿಂದ, ಪವನ್, ಅಮ್ಜದ್ ಇತಿಯಾರ್, ಪ್ರಭು, ನಜೀಮ್, ಪ್ರಸಾದ್ ಹಾಗೂ ಪತ್ತಿ ಸಾಯಿಚಂದ್ರ ಪ್ರಕಾಶ್ ಬಂಧಿತ ಆರೋಪಿಗಳು. ಆರೋಪಿಗಳು ಬೊಲೆರೊ ಪಿಕಪ್​​ ವಾಹನದಲ್ಲಿ ಆಂಧ್ರದ ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು.

ಆರೋಪಿಗಳ ಪೈಕಿ ನಜೀಂ ಮಂಗಳೂರಿನಲ್ಲಿ ರೌಡಿಶೀಟರ್  ಆಗಿದ್ದು, ಸದ್ಯ ಬಾಡಿ ವಾರೆಂಟ್ ಮೂಲಕ ಕೋಣಾಜೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಒಂಟಿಯಾಗಿ ನೆಲೆಸಿದ್ದ ಅಜ್ಜಿಯ ಕೊಲೆ

ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪಿಜಕ್ಕಳ ಗ್ರಾಮದಲ್ಲಿ ಒಂಟಿಯಾಗಿ ನೆಲೆಸಿದ್ದ ಅಜ್ಜಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ದರೋಡೆ ಮಾಡಿದ್ದಾರೆ. ಪಿಜಕ್ಕಳದ ಅಕ್ಕು (80) ಕೊಲೆಯಾದ ಅಜ್ಜಿ. ಅಜ್ಜಿಯ ಕಿವಿಓಲೆ , 20,000 ಹಣವನ್ನು ಆರೋಪಿಗಳು ದರೋಡೆ ಮಾಡಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫ್ಯಾಕ್ಟರಿಗೆ ಬೆಂಕಿ, 4-5 ಕಾರ್ಮಿಕರು ಸಿಲುಕಿರುವ ಶಂಕೆ

ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿರುವ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಮದ್ದಿನ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ.  ಫ್ಯಾಕ್ಟರಿಯಲ್ಲಿ 4-5 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ಅವಘಡದಲ್ಲಿ 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಘಟನೆಯಲ್ಲಿ 6 ಮಹಿಳೆಯರು ಹಾಗೂ ಇಬ್ಬರು ಪುರುಷ ಕಾರ್ಮಿಕರಿಗೆ ಗಾಯವಾಗಿದೆ. 42 ವರ್ಷದ ಚನ್ನವ್ವ, 20 ವರ್ಷದ ಪ್ರೇಮಾ, 27 ವರ್ಷದ ಮಾಳೆಪ್ಪ, 35 ವರ್ಷದ ನನ್ನಿಮಾ, 29 ವರ್ಷದ ನಿರ್ಮಲಾ, 45 ವರ್ಷದ ಗೌರವ್ವ 34 ವರ್ಷದ ವಿಜಯಲಕ್ಷ್ಮೀ, 18 ವರ್ಷದ ಮಲ್ಲಿಕ್‌ ರೆಹಾನ್‌ಗೆ ಗಾಯಗಳಾಗಿವೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾಹಿಲ್ ಬಾಗ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಫ್ಯಾಕ್ಟರಿ ಒಳಗಡೆ ಇನ್ನು ಹಲವು ಕಾರ್ಮಿಕರು ಸಿಲುಕಿರೋ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಭಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಲಾಬೂರಾಮ್ ಮಾತನಾಡಿ ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ ಹತೋಟಿಗೆ ತಂದಿದ್ದಾರೆ. ‌8 ಜನ ಗಾಯಗಳನ್ನು ಕಿಮ್ಸ್ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಫ್ಯಾಕ್ಟರಿ ಮಾಲೀಕರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಪಾರ್ಕಲಿಕ್ ಕ್ಯಾಂಡಲ್ ತಯಾರಿಕೆ ಮಾಡೋ ಫ್ಯಾಕ್ಟರಿ ಇದಾಗಿದ್ದರಿಂದ ಪದೇ ಪದೇ ಬ್ಲಾಸ್ಟ್ ಆಗುತ್ತಿತ್ತು. ಆದರೂ ನಾವು ಬೆಂಕಿ ನಂದಿಸೋ ಕಾರ್ಯ ಮಾಡಿದ್ದೆವೆ‌. ಘಟನೆ ಯಾಕೆ ಆಯ್ತು,ಕಾರಣ ಏನು ಎನ್ನೋ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೆವೆ ಎಂದರು.

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಿಟ್ ಆ್ಯಂಡ್ ರನ್  

ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಿಟ್ ಆ್ಯಂಡ್ ರನ್ ದುರ್ಘಟನೆಯಲ್ಲಿ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಶ್ವನಾಥ್ ಗಜಾನನ ಹೆಗಡೆ (53) ಮೃತ ದುರ್ದೈವಿ. ಕುಮಟಾ-ಶಿರಸಿ ಸಂಪರ್ಕ ರಸ್ತೆಯ ಹಿಪ್ಪನಳ್ಳಿ ಕ್ರಾಸ್‌ನಲ್ಲಿ ಸೀಬರ್ಡ್‌ಗೆ ಸೇರಿದ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಘಟನೆ ನಂತರ ಆರೋಪಿಗಳಾದ ಫಯಾಝ್ ಹಾಗೂ ಮೆಹಬೂಬ್ ಪರಾರಿಯಾಗಿದ್ದಾರೆ. ಆರೋಪಿ ಮೆಹಬೂಬ್ ಎಂಬಾತನನ್ನು ಕುಮಟಾ ಕತಗಾಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಸ್ ಚಲಾಯಿಸುತ್ತಿದ್ದ ಆರೋಪಿ ಫಯಾಝ್ ಪರಾರಿಯಾಗಿದ್ದು, ಬಸ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧಿಸಿ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 6:03 pm, Sat, 23 July 22